ಗೆಲುವಿನ ಹೊಸ್ತಿಲಲ್ಲಿ ಬಿಡೆನ್..!
ವಾಷಿಂಗ್ಟನ್, ನ.7-ಶ್ವೇತಭವನಕ್ಕಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ಗೆಲವು ನಮ್ಮದೇ ಎಂದು ಮಾಜಿ ಉಪಾಧ್ಯಕ್ಷ ಮತ್ತು ಡೆಮೊಕ್ರಾಟಿಕ್ ಪಕ್ಷದ ನಾಯಕ ಜೋ ಬಿಡೆನ್ ಹೇಳಿದ್ದಾರೆ. ನಾವು ಗೆಲುವಿನ ಮ್ಯಾಜಿಕ್ ನಂಬರ್ 270ಕ್ಕೆ ತೀರಾ ಸನಿಹದಲ್ಲಿದ್ದೇವೆ. ಈ ಫಲತಾಂಶವು ನಮ್ಮ ಗೆಲುವಿಗೆ ಸುಸ್ಪಷ್ಟವಾಗಿದೆ. ಇನ್ನು ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
ಆದರೂ ಈವರೆಗಿನ ಫಲಿತಾಂಶವು ಈ ಹೋರಾಟದಲ್ಲಿ ಜಯ ನಮ್ಮದೇ ಎಂಬುದನ್ನು ಸ್ಪಷ್ಟವಾಗಿ ಸೂಚಿಸಿವೆ ಎಂದು ಬಿಡೆನ್ ತಿಳಿಸಿದ್ದಾರೆ. ವಾಷಿಂಗ್ಟನ್ನಲ್ಲಿ ನಿನ್ನೆ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 24 ತಾಸುಗಳ ನವೀಕೃತ ಫಲಿತಾಂಶದಲ್ಲಿ ನಾವು ಗೆಲುವಿಗೆ ಮತ್ತಷ್ಟು ಹತ್ತಿರವಾಗಿದ್ದೇವೆ. ನಾವು 300 ಕಾಲೇಜ್ ಎಲೆಕ್ಟ್ರೋಲ್ (ಪ್ರತಿನಿಧಿಗಳ) ಮತಗಳನ್ನು ಪಡೆಯುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಈ ಮಧ್ಯೆ ಅಧ್ಯಕ್ಷ ಮತ್ತು ರಿಪಬ್ಲಿಕನ್ ಧುರೀಣ ಟ್ರಂಪ್ ಪ್ರಾಬಲ್ಯವಿದ್ದ ನವೆಡಾ ಮತ್ತು ಪೆನ್ಸಿಲ್ವೇನಿಯಾ ಪ್ರಾಂತ್ಯಗಳಲ್ಲಿ ಬಿಡೆನ್ ಗೆಲುವು ಸಾಧಿಸಿದ್ದು, ಇನ್ನು ಕೆಲವು ರಾಜ್ಯಗಳಲ್ಲಿ ಮುನ್ನಡೆಯಲ್ಲಿದ್ಧಾರೆ. ಈ ಮಧ್ಯೆ, ಚುನಾವಣೆಗಳಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಟ್ರಂಪ್ ದೊಡ್ಡ ಮಟ್ಟದ ಕಾನೂನು ಸಮರ ಆರಂಭಿಸಿದ್ದರೂ ಕೆಲವು ರಾಜ್ಯಗಳಲ್ಲಿ ಮರು ಚುನಾವಣೆ ನಡೆಸುವ ಸಾಧ್ಯತೆಗಳು ಕ್ಷೀಣಿಸಿದೆ. ಹೀಗಾಗಿ ಜೋ ಬಿಡೆನ್ ವೈಟ್ಹೌಸ್ ಹಾದಿ ಮತ್ತಷ್ಟು ಸುಗಮವಾಗಿದೆ.
ಇಡೀ ವಿಶ್ವದಾದ್ಯಂತ ಭಾರೀ ಕುತೂಹಲ ಕೆರಳಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಅಂತಿಮ ಘಟ್ಟ ತಲುಪಿದ್ದು, ಅಧ್ಯಕ್ಷ ಗದ್ದುಗೇರಲು ಜೋ ಬಿಡೆನ್ ಸಜ್ಜಾಗಿದ್ದಾರೆ. ಇದೇ ವೇಳೆ ಭಾರತೀಯ ಮೂಲದ ಸೆನೆಟರ್ ಮತ್ತು ಪ್ರಭಾವಿ ನಾಯಕಿ ಕಮಲಾ ಹ್ಯಾರಿಸ್ ಅವರೂ ಕೂಡ ಉಪಾಧ್ಯಕ್ಷೆ ಸ್ಥಾನ ಅಲಂಕರಿಸಲಿದ್ದಾರೆ. ಕಮಲಾ ಹಾಲಿ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರನ್ನು ಮಣಿಸಿ ಉಪಾಧ್ಯಕ್ಷ ಗದ್ದುಗೇ ಏರಲು ಸನ್ನದ್ಧರಾಗಿದ್ದಾರೆ.
ಮತಗಳ ಎಣಿಕೆ ಆರಂಭದಿಂದಲೂ ಬಿಡೆನ್ಗೆ ತೀವ್ರ ಪೈಪೋಟಿ ನೀಡುತ್ತಿದ್ದ ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷದ ಉಮೇದುವಾರ ಡೊನಾಲ್ಡ್ ಟ್ರಂಪ್ ಗೆಲುವಿನ ಅಸೆ ಕಮರಿ ಹೋಗಿದೆ. ಅನೇಕ ರಾಜ್ಯಗಳಲ್ಲಿ ಬಿಡೆನ್ ಮತ್ತು ಅವರ ಬೆಂಬಲಿಗರು ಚುನಾವಣಾ ಅಕ್ರಮಗಳನ್ನು ನಡೆಸಿದ್ಧಾರೆ ಎಂದು ಆರೋಪಿಸಿರುವ ಟ್ರಂಪ್ ಕಾನೂನು ಸಮರ ಆರಂಭಿಸಿದ್ದರೂ ಮಿಚಿಗನ್ ಮತ್ತು ಜಾರ್ಜಿಯಾ ರಾಜ್ಯಗಳ ನ್ಯಾಯಾಲಯಗಳು ಅವರ ಮನವಿಗಳನ್ನು ವಜಾಗೊಳಿಸಿದೆ.
ಅಲ್ಲದೆ, ಸುಪ್ರೀಂಕೋರ್ಟ್ನಲ್ಲಿ ಕಾನೂನು ಸಮರ ಹೂಡುವ ಅವರ ಹಾದಿಯೂ ಕಷ್ಟವಾಗಿದೆ.
ಹೈವೋಲೇಜ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, 538 ಎಲೆಕ್ಟ್ರೋಲ್ ಕಾಲೇಜ್ ವೋಟ್ಗಳಲ್ಲಿ (ಪ್ರತಿನಿಧಿಗಳ ಮತ) ಬಿಡೆನ್ ಮ್ಯಾಜಿಕ್ 270 ಸಂಖ್ಯೆಗೆ ತೀರಾ ಸನಿಹದಲ್ಲಿದ್ದಾರೆ. ಅವರು 269 ಪ್ರಾತಿನಿಧಿಕ ಮತಗಳನ್ನು ಗಳಿಸಿದ್ದು, ಶ್ವೇತಭವನದ ಕುರ್ಚಿಗೇರಲು ಆವರಿಗೆ ಕೇವಲ ಒಂದೇ ಹೆಜ್ಜೆ ಬಾಕಿ ಇದೆ. . ಆದರೆ ಡೊನಾಲ್ಡ್ ಟ್ರಂಪ್ 214 ಎಲೆಕ್ಟ್ರೋಲ್ ಕಾಲೇಜ್ ಮತಗಳನ್ನು ಗಳಿಸಿದ್ದು, ಅವರ ಗೆಲುವಿನ ಮಹತ್ವಾಕಾಂಕ್ಷೆ ನುಚ್ಚುನೂರಾಗಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಅಧಿಕೃತವಾಗಿ ಪ್ರಕಟಗೊಳ್ಳಬೇಕಿದೆ. ಮತಗಳ ಎಣಿಕೆ ಆರಂಭದಿಂದಲೂ ಬಿಡೆನ್, ಅಧ್ಯಕ್ಷ-ರಿಪಬ್ಲಿಕ್ ಪಕ್ಷದ ಉಮೇದುವಾರ ಡೊನಾಲ್ಡ್ ಟ್ರಂಪ್ ಅವರಿಗಿಂತ ಮುನ್ನಡೆ ಕಾಯ್ದುಕೊಂಡು ಬಂದಿದ್ದರು. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ದಾಖಲೆ ಪ್ರಮಾಣದ ಮತದಾನವಾಗಿದ್ದು, 23.9 ಕೋಟಿ ಅಮೆರಿಕನ್ನರು ಮತದಾನದ ಹಕ್ಕುಗಳನ್ನು ಹೊಂದಿದ್ದರು. ಆರಂಭದಲ್ಲೇ 16 ಕೋಟಿ ಮಂದಿ ಮತ ಚಲಾಯಿಸಿರುವುದು ಹೊಸ ದಾಖಲೆಯಾಗಿದೆ.
ಭಾರೀ ಸಂಖ್ಯೆಯಲ್ಲಿ ಮತದಾನವಾಗಿರುವುದರಿಂದ ಫಲಿತಾಂಶ ನಿರೀಕ್ಷೆಗೂ ಮೀರಿ ವಿಳಂಬವಾಗಿದೆ. ಡೊನಾಲ್ಡ್ ಟ್ರಂಪ್ ಕಾನೂನು ಸಮರ ಮತ್ತು ಹಿಂಸಾಚಾರ ಸಾಧ್ಯತೆ ಹಿನ್ನೆಲೆಯಲ್ಲಿ ಅಧಿಕೃತ ಚುನಾವಣಾ ಫಲಿತಾಂಶವೂ ಸಹ ತಡವಾಗಿದೆ.