ಬೆಂಗಳೂರು, ಅ.29: ನಟ ಪುನೀತ್ ರಾಜ್ ಕುಮಾರ್(46) ಹೃದಯಾಘಾತದಿಂದ ಇಂದು ಮಧ್ಯಾಹ್ನ ನಗರದ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಈ ಬಗ್ಗೆ ವಿಕ್ರಂ ಆಸ್ಪತ್ರೆಯ ವೈದ್ಯರು ಇನ್ನಷ್ಟೇ ಅಧಿಕೃತ ಘೋಷಣೆ ಮಾಡಬೇಕಿದೆ.

ಅವರಿಗೆ ಇಂದು ಪೂರ್ವಾಹ್ನ 11 ಗಂಟೆ ವೇಳೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಇಸಿಜಿ ಮಾಡಿಸಿದಾಗ ಹೃದಯಾಘಾತ ಸಂಭವಿಸಿರುವುದು ದೃಢಪಟ್ಟಿತ್ತು. ಕೂಡಲೇ ಅವರನ್ನು ವಿಕ್ರಂ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ತಜ್ಞ ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್ ಎಂದೇ ಗುರುತಿಸಿಕೊಂಡಿದ್ದ ಪುನೀತ್, ಬಾಲನಟರಾಗಿ ಚಲನಚಿತ್ರ ಪ್ರವೇಶಿಸಿದ್ದರು. ಬೆಟ್ಟದ ಹೂ ಚಿತ್ರದ ಅಭಿನಯಕ್ಕಾಗಿ ಅವರಿಗೆ ಅತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. 2002ರಲ್ಲಿ ಅಪ್ಪು ಚಿತ್ರದ ಮೂಲಕ ನಾಯಕ ನಟರಾದ ಪುನೀತ್ ಮೊದಲ ಚಿತ್ರವೇ ಸೂಪರ್ ಹಿಟ್ ಆಗಿತ್ತು. ಬಳಿಕ ಹಿಂದಿರುಗಿ ನೋಡದ ಅವರು ಅನೇಕ ಹಿಟ್ ಚಿತ್ರಗಳ ಮೂಲಕ ಪವರ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದರು.

 ಖ್ಯಾತ ನಟ ಡಾ.ರಾಜ್ ಕುಮಾರ್ ಅವರ 5ನೇ ಪುತ್ರರಾಗಿ 1975ರ ಮಾರ್ಚ್ 17ರಂದು ಜನಿಸಿದ ಪುನೀತ್ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ್ದರು. 1999 ಡಿಸೆಂಬರ್ 1ರಂದು ಚಿಕ್ಕಮಗಳೂರಿನ ಅಶ್ವಿನಿ ರೇವಂತ್ ಅವರನ್ನು ವಿವಾಹವಾಗಿದ್ದ ಪುನೀತ್ ಅವರಿಗೆ ಧೃತಿ ಮತ್ತು ವಂದಿತಾ ಎಂಬಿಬ್ಬರು ಪುತ್ರಿಯರಿದ್ದಾರೆ.

ವಿಕ್ರಂ ಆಸ್ಪತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಚಿತ್ರರಂಗದ ದಂಡೇ ಆಸ್ಪತ್ರೆಗೆ ಆಗಮಿಸಿದ್ದಾರೆ. ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಥಳಕ್ಕಾಗಮಿಸಿದ್ದು, ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

ಶಾಲೆ- ಕಾಲೇಜುಗಳಿಗೆ ಅರ್ಧದಿನ ರಜೆ

ಪುನೀತ್ ನಿಧನದ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಬಹುತೇಕ ಶಾಲೆ- ಕಾಲೇಜುಗಳಿಗೆ ಅರ್ಧದಿನ ರಜೆ ಘೋಷಿಸಲಾಗಿದೆ.

You Might Also Like

" data-numposts="10" data-width="">