ಚೀನಾದಿಂದ ಭಾರತಕ್ಕೆ ಬರುವ ಕಂಪನಿಗಳಿಗೆ ಜಪಾನ್ ನೀಡುತ್ತಿದೆ ಆರ್ಥಿಕ ನೆರವು
ನವದೆಹಲಿ: ಕೈಗಾರಿಕೋದ್ಯಮಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಚೀನಾದಿಂದ ಭಾರತಕ್ಕೆ ಸ್ಥಳಾಂತರಿಸುವುದಾದರೆ ಸಬ್ಸಿಡಿ ಪಡೆಯಲು ಅರ್ಹರು ಎಂದು ಜಪಾನ್ ಸರ್ಕಾರ ಘೋಷಿಸಿದೆ.
ಜಪಾನಿನ ಪೂರೈಕೆ ಜಾಲವನ್ನು ವಿಸ್ತರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ. ಒಂದು ದೇಶ ಅಥವಾ ಪ್ರಾಂತ್ಯದ ಮೇಲೆ ಹೆಚ್ಚಿನ ಅವಲಂಬನೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಸಬ್ಸಿಡಿ ಯೋಜನೆಯನ್ನು ವಿಸ್ತರಿಸುತ್ತಿದೆ. ತುರ್ತು ಸಂದರ್ಭದಲ್ಲೂ ವೈದ್ಯಕೀಯ ಪೂರೈಕೆ ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳ ಬಿಡಿಭಾಗಗಳ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳುವುದು ಇದರ ಉದ್ದೇಶವಾಗಿದೆ ಎಂದು ಜಪಾನ್ ಹೇಳಿದೆ.
ಏಷಿಯಾನ್ ದೇಶಗಳಲ್ಲಿ ಉತ್ಪಾದನೆ ಚಟುವಟಿಕೆಗಳನ್ನು ಕೈಗೊಳ್ಳಲು ಜಪಾನ್ ಸರ್ಕಾರ 2020ರ ಅವಧಿಗೆ 23.5 ಬಿಲಿಯನ್ ಯೆನ್ ಮೊತ್ತವನ್ನು ಸಬ್ಸಿಡಿ ನೀಡಲೆಂದೇ ತೆಗೆದಿರಿಸಿದೆ. ಸದ್ಯ ಜಪಾನ್ ಕಂಪನಿಗಳು ಚೀನಾದಲ್ಲಿಯೇ ಹೆಚ್ಚು ಸಾಂದ್ರಿಕರಿಸಿವೆ. ಜತೆಗೆ ಕರೊನಾ ಸಂದರ್ಭದಲ್ಲಿ ಇಲ್ಲಿಂದ ಸರಬರಾಜು ನಿಂತು ಹೋಗಿತ್ತು. ಅಲ್ಲದೇ, ಇತರ ಸಂದರ್ಭಗಳಲ್ಲಿ ಇದು ಪೂರೈಕೆ ವ್ಯವಸ್ಥೆ ಮೇಲೆ ಭಾರಿ ಪರಿಣಾಮ ಬೀರಲಿದೆ. ಸದ್ಯ ಜಪಾನ್ ಸರ್ಕಾರ 30 ಕಂಪನಿಗಳ ಅರ್ಜಿಗಳಿಗೆ ಒಪ್ಪಿಗೆ ನೀಡಿದ್ದು, 10 ಬಿಲಿಯನ್ ಯೆನ್ ಮೊತ್ತವನ್ನು ಸಬ್ಸಿಡಿಯಾಗಿ ನೀಡಿದೆ.