ಹಾನಗಲ್, ಅ.27: ನನ್ನ ರಿಮೋಟ್ ಕಂಟ್ರೋಲ್ ಜನರ ಬಳಿ ಇದೆ. ಜನರೇ ನನ್ನ ರಿಮೋಟ್ ಕಂಟ್ರೋಲ್ ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದರು.

ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಹಾನಗಲ್ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಇಂದು ಆಯೋಜಿಸಲಾಗಿದ್ದ ಬೃಹತ್ ರೋಡ್ ಶೋ ಉದ್ದೇಶಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಅವರು ನನ್ನನ್ನು ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿ ಎಂದು ಕರೆದಿದ್ದಾರೆ. ಅವರು ಹೇಳಿದ್ದು ನಿಜ. ನನ್ನ ರಿಮೋಟ್ ಕಂಟ್ರೋಲ್ ಜನರ ಬಳಿ ಇದೆ. ಆದರೆ ಸಿದ್ದರಾಮಯ್ಯ ಕಂಟ್ರೋಲ್ ದಿಲ್ಲಿಯ ಕುಟುಂಬವೊಂದರ ಕೈಯಲ್ಲಿದೆ ಎಂದು ಅವರು ಆರೋಪಿಸಿದರು.

ಸ್ವಾಭಿಮಾನ ತೋರಿಸಿ: ಹಾನಗಲ್ ಕ್ಷೇತ್ರದ ಜನ ಸ್ವಾಭಿಮಾನಿಗಳು. ಹಾವೇರಿ ಜಿಲ್ಲೆಯ ಜನ ಸ್ವಾಭಿಮಾನಿಗಳು. ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯನ್ನು ಮಾಡಿರುವುದು ಸಿ.ಎಂ.ಉದಾಸಿ. ಹೀಗಾಗಿ ನಮ್ಮ ಸ್ವಾಭಿಮಾನವನ್ನು ಪ್ರದರ್ಶಿಸುವ ಅವಕಾಶ ಒದಗಿಬಂದಿದೆ. ಪ್ರತಿಯೊಬ್ಬ ಮತದಾರರು ಮತ ಚಲಾಯಿಸಿ. ನಿಮ್ಮ ಹಕ್ಕು ಚಲಾಯಿಸಿ. ಸ್ವಾಭಿಮಾನವನ್ನು ಪ್ರದರ್ಶಿಸಿ. ಬಿಜೆಪಿಯನ್ನು ಗೆಲ್ಲಿಸಿ ಎಂದು ಬಸವರಾಜ ಬೊಮ್ಮಾಯಿ ಕರೆ ನೀಡಿದರು.

ಕಾಂಗ್ರೆಸ್ ಪಕ್ಷದವರು ಕತ್ತಲರಾತ್ರಿ ಮಾಡಲು ಬರುತ್ತಾರೆ. ನಿಮ್ಮ ಮತ ಕದಿಯಲು ಪ್ರಯತ್ನ ಮಾಡುತ್ತಾರೆ. ಅವರ ಆಮೀಷಕ್ಕೆ ಬಲಿಯಾಗಬೇಡಿ ಎಂದು ಬಸವರಾಜ ಬೊಮ್ಮಾಯಿ ಮತದಾರರಿಗೆ ಮನವಿ ಮಾಡಿದರು.

Source: Vartha Bharathi

You Might Also Like

" data-numposts="10" data-width="">