ನವದೆಹಲಿ: ಲಡಾಖ್​ ಗಡಿಯಲ್ಲಿ ಮತ್ತೆ ಕ್ಯಾತೆ ತೆಗೆದಿರುವ ಚೀನಾಗೆ ಭಾರತ ಸರ್ಕಾರ ಮತ್ತೊಮ್ಮೆ ಶಾಕ್​ ನೀಡಿದ್ದು, ಯುವ ಸಮುದಾಯವನ್ನು ಸಮೂಹ ಸನ್ನಿಗೆ ದೂಡಿರುವ ಮೊಬೈಲ್​ ಗೇಮ್​ ಪಬ್​ಜಿ ಸೇರಿದಂತೆ ಚೀನಾದ 118 ಆ್ಯಪ್​ಗಳನ್ನು ಕೇಂದ್ರ ಸರ್ಕಾರ ಬುಧವಾರ ಬ್ಯಾನ್​ ಮಾಡಿ ಆದೇಶ ಹೊರಡಿಸಿದೆ.

ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆ ಹಾಗೂ ಭಾರತದ ಸುರಕ್ಷತೆ ಮತ್ತು ಭದ್ರತಾ ದೃಷ್ಟಿಯಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಪ್ರಕಾರ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್​ 69A ಅಡಿಯಲ್ಲಿ ಮೊಬೈಲ್​ ಗೇಮ್​ ಅನ್ನು ಬ್ಯಾನ್​ ಮಾಡಲಾಗಿದೆ. ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆ, ದೇಶದ ಸುರಕ್ಷತೆ ಹಾಗೂ ರಾಜ್ಯ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಭದ್ರತೆಯೆಡೆಗೆ ಈ ಗೇಮ್​ನಲ್ಲಿ ಪೂರ್ವಾಗ್ರಹ ಪೀಡಿತ ಚಟುವಟಿಕೆಗಳು ಇರುವುದರಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.

ಕೋಟ್ಯಾಂತರ ಭಾರತೀಯ ಮೊಬೈಲ್​ ಮತ್ತು ಅಂತರ್ಜಾಲ ಬಳಕೆದಾರರ ಸುರಕ್ಷತೆ ಮತ್ತು ಹಿತಾಸಕ್ತಿಯ ದೃಷ್ಟಿಯಿಂದಲೂ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

ಆ್ಯಪ್​ಗಳ ಬಗ್ಗೆ ವಿವಿಧ ಮೂಲಗಳಿಂದ ಸಾಕಷ್ಟು ದೂರುಗಳನ್ನು ಸ್ವೀಕರಿಸಿದ್ದೇವೆ. ಆ್ಯಂಡ್ರಾಯ್ಡ್ ಮತ್ತು ಐಒಎಸ್​ ವೇದಿಕೆಯಲ್ಲಿ ಲಭ್ಯವಾಗುವ ಆ್ಯಪ್​ಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆ್ಯಪ್​ಗಳ ಮೂಲಕ ಬಳಕೆದಾರರ ಡಾಟಾವನ್ನು ಅನಧಿಕೃತ ರೀತಿಯಲ್ಲಿ ಭಾರತದ ಹೊರಗಿನ ಸ್ಥಳಗಳ ಸರ್ವರ್‌ಗಳಿಗೆ ರಹಸ್ಯವಾಗಿ ರವಾನಿಸಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಮಾಹಿತಿಯ ಮೇಲೆ ಕನ್ನ ಹಾಕುವುದು ದೇಶದ ಭದ್ರತೆ ಮತ್ತು ರಕ್ಷಣೆಗೆ ವಿರುದ್ಧವಾಗಿದೆ. ಕೊನೆಗೆ ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆಯಾಗುತ್ತದೆ. ತುಂಬಾ ಗಂಭೀರವಾಗಿ ಯೋಚಿಸಬೇಕಾದ ಹಾಗೂ ದೇಶದ ಕಾಳಜಿಯ ವಿಚಾರ ಆಗಿರುವುದರಿಂದ ತುರ್ತು ಮಾನದಂಡಗಳನ್ನು ಅನುಸರಿಸಿದ್ದೇವೆ ಎಂದು ಸರ್ಕಾರ ತಿಳಿಸಿದೆ.

ಅಂದಹಾಗೆ ಬ್ಯಾನ್​ ಆಗಿರುವ ಪಬ್​ಜಿ ಗೇಮ್​ಗೆ ಭಾರತದಲ್ಲಿ 33 ಮಿಲಿಯನ್​ ಬಳಕೆದಾರರು ಇದ್ದರು. ಅಲ್ಲದೆ, ಇದರಿಂದ ಭಾರಿ ಮೊತ್ತದ ಆದಾಯವೂ ಸಹ ಚೀನಾಗೆ ಹರಿದು ಹೋಗುತ್ತಿತ್ತು. ಇದೀಗ ಲಡಾಖ್​ ಗಡಿಯಲ್ಲಿ ಚೀನಾ ಮತ್ತೆ ತನ್ನ ಕ್ಯಾತೆ ತೆಗೆದಿರುವುದರಿಂದ ಸರ್ಕಾರ ಸರಿಯಾದ ತಿರುಗೇಟು ನೀಡಿದೆ. ಈ ಮುಂಚೆಯೂ ಅನೇಕ ಚೀನಾ ಆ್ಯಪ್​ಗಳನ್ನು ಸರ್ಕಾರ ರದ್ದು ಮಾಡಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿಯವರ ವೋಕಲ್​ ಫಾರ್​ ಲೋಕಲ್​ ಎಂಬ ಮಂತ್ರವೂ ಸಹ ದೇಶದಲ್ಲಿ ಚಾಲ್ತಿಯಲ್ಲಿದೆ. (ಏಜೆನ್ಸೀಸ್​)

You Might Also Like

" data-numposts="10" data-width="">