ಇತ್ತೀಚೆಗೆ ವಿಶ್ವದಾದ್ಯಂತ ಊಹೆಗೂ ನಿಲುಕದ ಬೆಳವಣಿಗೆಗಳಾಗುತ್ತಿವೆ. ಹಿಂದಿನಿಂದಲೂ ಚೀನಾ ತನ್ನ ದ್ವಂದ್ವ ನಿಲುವಿನಿಂದ ವಿಶ್ವದ ಬಹುತೇಕ ರಾಷ್ಟ್ರಗಳ ದ್ವೇಷ ಬೆಳೆಸಿಕೊಂಡಿದೆ. ಅಂತಾರಾಷ್ಟ್ರೀಯ ವ್ಯಾಪಾರ ಒಪ್ಪಂದದ ಪರಿಪೂರ್ಣ ಉಪಯೋಗ ಪಡೆದು ಜಗತ್ತಿನೆಲ್ಲೆಡೆ ತನ್ನ ಕಬಂಧಬಾಹುಗಳನ್ನು ಚಾಚಿಕೊಂಡಿರುವವರಲ್ಲಿ ಮುಂಚೂಣಿಯಲ್ಲಿದೆ. ಕೆಲವರನ್ನು ಸಾಲದ ಬಲೆಯಲ್ಲಿ ಸಿಲುಕಿಸಿ, ಇನ್ನು ಕೆಲವು ರಾಷ್ಟ್ರದ ಉದ್ದಿಮೆಗಳ ಪಾಲುದಾರಿಕೆಯಲ್ಲಿ ಸಿಂಹಪಾಲು ಪಡೆದು ಅಂಥ ಉದ್ದಿಮೆಗಳ ನೀತಿ ನಿರೂಪಣೆಯಲ್ಲಿ, ಲಾಭಾಂಶದಲ್ಲಿ ಹೀಗೆ ಎಲ್ಲ ರಂಗಗಳಲ್ಲೂ ವಿಜೃಂಭಿಸಿದೆ. ಆದರೆ, ಆ ದೇಶವೀಗ ತನ್ನ ಉದ್ಧಟತನಕ್ಕೆ ಪ್ರತಿಯಾಗಿ ವಿಶ್ವದೆಲ್ಲೆಡೆಯಿಂದ ಪ್ರತಿರೋಧ ಎದುರಿಸುತ್ತಿದೆ. 
ಚೀನಾದ ಅಕ್ಟೋಪಸ್ ಹಿಡಿತದಿಂದ ಬಿಡಿಸಿಕೊಂಡು ಆತ್ಮನಿರ್ಭರದ ಸಾಧನೆ ಕಲ್ಲುಮುಳ್ಳಿನ ಹಾದಿಯೆಂಬುದೂ ಅಷ್ಟೇ ಸತ್ಯ. ಸರ್ಕಾರ, ಉದ್ದಿಮೆಗಳು, ಒಕ್ಕೂಟಗಳ ದಿಟ್ಟ ಕ್ರಮಗಳ ಜತೆಯಲ್ಲಿ ಚೀನಾ ಉತ್ಪನ್ನಗಳ ಬಹಿಷ್ಕಾರದ ಆಂದೋಲನವೂ ಬಹಳಷ್ಟು ಸದ್ದು ಮಾಡುತ್ತಿದೆ; ಇದೆಲ್ಲವೂ ಸ್ವಾಗತಾರ್ಹವೇ. ಆದರೆ ಇದೆಲ್ಲದರ ಹಿಂದೆ ಅಡಗಿರುವ, ಚಿಕ್ಕದಾದರೂ ಒಟ್ಟು ಸೇರಿಸಿ ನೋಡಿದರೆ ದೊಡ್ಡ ಪರಿಣಾಮ ಬೀರುವ ವಿಷಯವೊಂದಿದೆ. ಈಗಾಗಲೇ ರಾಜಕೀಯ ಕಾರಣಗಳಿಂದ, ಇನ್ನಿತರ ಆಮಿಷಗಳ ಕಾರಣಕ್ಕೆ ದೇಶದ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿರುವ ಚೀನಾದ ಉತ್ಪನ್ನಗಳು ಮಧ್ಯಮ ಮತ್ತು ಸಣ್ಣ ವ್ಯಾಪಾರಿಗಳ ದಾಸ್ತಾನಿನಲ್ಲಿವೆ. ಹೊರಗಿನಿಂದ ನೋಡುವವರಿಗೆ ಇದು ಚಿಕ್ಕ ವಿಷಯವೆನಿಸಬಹುದು. ಆದರೆ ಈ ‘ಚಿಕ್ಕ ದಾಸ್ತಾನೇ’ ಸಣ್ಣ ವ್ಯಾಪಾರಿಗಳಿಗೆ ‘ದೊಡ್ಡ ದಾಸ್ತಾನು’. ವಾರ್ಷಿಕ ಒಂದೆರಡು ಲಕ್ಷ ವ್ಯವಹಾರ ಮಾಡುವವರಲ್ಲಿ ಇರುವ ಕೆಲವು ಸಾವಿರ ಮೊತ್ತದ ದಾಸ್ತಾನು ಮಾರಾಟವಾದರೆ ಮಾತ್ರ ಜೀವನ. ಇಲ್ಲವಾದರೆ ಅವರ ಬದುಕೇ ದುರ್ಭರ. ಆತ್ಮನಿರ್ಭರ ಅತ್ಯಗತ್ಯ, ಅದೇ ರೀತಿಯಲ್ಲಿ ಈಗಾಗಲೇ ಸಣ್ಣ ವ್ಯಾಪಾರಿಗಳಲ್ಲಿ ಇರುವ ದಾಸ್ತಾನಿನ ವಿಲೇವಾರಿ ಮಾಡುವುದೂ ಅಷ್ಟೇ ಅಗತ್ಯ. ಈ ನಿಟ್ಟಿನಲ್ಲೂ ಸರ್ಕಾರ ಚಿಂತಿಸಬೇಕಾಗಿದೆ.

You Might Also Like

" data-numposts="10" data-width="">